ರುದ್ರ

ಭಾರತೀಯ ಸಾಹಿತ್ಯದಲ್ಲಿ ರುದ್ರನ ಸ್ಥಾನ ವಿಶಿಷ್ಟವಾದುದು. ಈ ಬಗೆಗೆ ಪಾಶ್ಚಾತ್ಯ ಮತ್ತು ಪೌರ್ವಾತ್ಯ ವಿದ್ವಾಂಸರ ಅಭಿಪ್ರಾಯಗಳನ್ನು ಹೀಗೆ ಸಂಗ್ರಹಿಸಬಹುದು.

ಬಹುತೇಕ ಪಾಶ್ಚಾತ್ಯರ ದೃಷ್ಟಿಯಲ್ಲಿ ರುದ್ರ ಒಬ್ಬ ತಾತ್ತ್ವಿಕ ದೇವತೆ. ಋಗ್ವೇದದ ಮೂರು ಸೂಕ್ತಗಳು ರುದ್ರನನ್ನು ಸ್ತುತಿಸಿವೆ. ಮತ್ತೊಂದು ಸೂಕ್ತದ ಮೊದಲ ಆರು ಮಂತ್ರಗಳು ರುದ್ರನನ್ನೂ ಕಡೆಯ ಮೂರು ಮಂತ್ರಗಳು ಸೋಮನನ್ನೂ ಸ್ತುತಿಸಿವೆ. ಇನ್ನೊಂದು ಸೂಕ್ತದಲ್ಲಿ ರುದ್ರ ಮತ್ತು ಸೋಮರನ್ನು ಜೊತೆ ಜೊತೆಗೆ ಸುತ್ತಿಸಲಾಗಿದೆ. ಇದರಂತೆ ಬೇರೆ ಬೇರೆ ದೇವತೆಗಳ ಸ್ತುತಿಗಳಲ್ಲಿಯೂ ಕೂಡ ರುದ್ರನ ಉಲ್ಲೇಖವಿದೆ. ಇದರಿಂದ ಅಗ್ನಿ, ಸೋಮ ಮತ್ತು ಇತರ ದೇವತೆಗಳ ಸ್ತುತಿಗಳಲ್ಲಿಯೂ ಕೂಡ ರುದ್ರನ ಸಮಾವೇಶವಿರುವುದರಿಂದ ಸರ್ವೋ ವೈ ರುದ್ರ:. ಆತ ಸರ್ವದೇವತಾಸ್ವರೂಪ ಎಂಬುದು ಸಿದ್ಧವಾಗುತ್ತದೆ. 

ಈ ಸೂಕ್ತಗಳಲ್ಲಿ ಕಾಣುವ ರುದ್ರಸ್ವರೂಪದ ವಿಷಯದಲ್ಲಿ ಅನೇಕ ಸಂದೇಹಗಳಿವೆ. ರುದ್ರ ಶಬ್ದದ ಶಾಬ್ದಿಕ ಅರ್ಥ, ಮರುತ್ತುಗಳೊಡನೆ ಅವನ ಸಂಬಂಧ, ಅವನ ಬಿಭ್ರುವರ್ಣ ಮತ್ತು ಅವನ ಕ್ರೂರ ಸ್ವರೂಪ ಇವುಗಳನ್ನು ಪರಿಶೀಲಿಸಿದ ವಿದ್ಯಾಂಸರು ರುದ್ರ ಜಂಝಾವಾತದ ಪ್ರತೀಕ ಎಂದೂ (ವೇಬರ್), ಮೆಕ್ಡೋನಲ್ ರುದ್ರ ಮತ್ತು ಅಗ್ನಿಗಳ ಕ್ರೌರ್ಯ ಮತ್ತು ಸೌಮ್ಯತ್ವಗಳನ್ನು ಪರಿಶೀಲಿಸಿ ರುದ್ರ ಜಂಝಾವಾತದ ವಿಧ್ವಂಸಕ ಸ್ವರೂಪದ ಪ್ರತೀಕ (ಮೆಕ್ಡೋನಲ್) ಎಂದೂ ಹೇಳಿದ್ದಾರೆ. ಭಂಡಾರಕರ್ ಅವರು ರುದ್ರ ಕೇವಲ ವಿನಾಶಕಾರಕ ಶಕ್ತಿಗಳ ಪ್ರತೀಕ ಎನ್ನುತ್ತಾರೆ. ಈ ದಿಸೆಯಲ್ಲಿ ಮ್ಯೂರಹ್ ವಿಲ್ಸನ್, ಕೀತ್ ಮೊದಲಾದವರು ರುದ್ರನ ಘಾತುಕ ಬಾಣಗಳನ್ನು ನೆನೆದು ಅವನು ಮೃತ್ಯುದೇವತೆ ಎಂದು ಭಾವಿಸಿದ್ದಾರೆ.

ಮೇಲಿನ ವಿದ್ವಾಂಸರ ಅನಿಸಿಕೆಗಳಲ್ಲಿರುವ ರುದ್ರನ ಸ್ವರೂಪವನ್ನು ಕುರಿತ ಮುಖ್ಯ ದೋಷವೆಂದರೆ ಅವು ರುದ್ರನ ಸಮಗ್ರ ಸ್ವರೂಪವನ್ನು ಬಿಂಬಿಸಲಾರವು ಎಂಬುದು. ಏಕೆಂದರೆ ಆ ಮಾತುಗಳಲ್ಲಿ ರುದ್ರನ ಸ್ವರೂಪವನ್ನು ಕುರಿತ ಕೆಲವು ಮಾತುಗಳು ಪರಸ್ಪರ ವಿರೋಧವಾಗಿವೆ ಮತ್ತು ರುದ್ರನ ಸ್ವರೂಪದ ಒಂದೊಂದು ಅಂಶಕ್ಕೂ ಸಂಬಂಧಿಸಿವೆ. ಉದಾಹರಣೆಗೆ ರುದ್ರ ಭಯಂಕರ ಎಂಬುದರ ಜೊತೆಗೆ ಅವನು ಶಿವಎಂದರೆ ಸೌಮ್ಯನೂ ಆಗಿದ್ದಾನೆ. ಕೆಲವು ಸಲ ಅವನು ಉಗ್ರ ರೂಪುಧರಿಸಿ ಮನುಷ್ಯರನ್ನು ಮತ್ತು ಪಶುಗಳನ್ನು ಕೊಲ್ಲುವಂತೆ ಅವುಗಳ ಕಲ್ಯಾಣಕಾರಕನೂ ಆಗಿದ್ದಾನೆ. ಆತನ ಶಕ್ತಿ ಜೀವನದಾಯಿನಿ. ಅದಕ್ಕಾಗಿಯೇ ಜನರು ಸಂತಾನ ಮತ್ತು ಸಂಪತ್ ಸಂವೃದ್ಧಿಗಾಗಿ ರುದ್ರನ ಮೊರೆಹೋಗುತ್ತಾರೆ.

ರುದ್ರ ವೈದ್ಯ ಶ್ರೇಷ್ಠ(ಮಹಾಭಿಷಕ್) ಅವನ ಹತ್ತಿರ ತಂಪಾದ ಮತ್ತು ರೋಗನಾಶಕ ಔಷಧಗಳಿವೆ. ಅವನು ಮರುತರ ಪಿತೃ. ಒಟ್ಟಿನಲ್ಲಿ ಋಗ್ವೇದ ಸೂಕ್ತಕಗಳಲ್ಲಿಯ ರುದ್ರನ ವಿಶಿಷ್ಟ ಉಪಾಧಿಗಳ ವಿಶ್ಲೇಷಣ ದಿಂದ ಮೇಘಗಳಲ್ಲಿ ಹೊಳೆಯುವ ವಿದ್ಯುತ್ತು ಮತ್ತು ಅವುಗಳೊಂದಿಗೆ ಆಗುವ ಘನ ಘೋರಗರ್ಜನೆ ಹಾಗೂ ವರ್ಷ (ಮಳೆ) ಇವುಗಳ ಪ್ರಾಕೃತಿಕ ತತ್ತ್ವದ ಪ್ರತೀಕವೇ ರುದ್ರ ಎಂದು ಭಾವಿಸಲಾಗಿದೆ.

ರುದ್ರನ ವಿಶಿಷ್ಟವಾದ ಅಸ್ತ್ರ ಧನುಸ್ಸು. ಈ ಧನುಸ್ಸಿನಿಂದ ಬಿಡುವ ಬಾಣಗಳು ಮನುಷ್ಯ ಮತ್ತು ಪಶುಗಳೆರಡನ್ನೂ ಕೊಲ್ಲುತ್ತವೆ. ರುದ್ರನಿಗಿರುವ ಗೋಘ್ನ ಮತ್ತು ನೃಘ್ನ ಹಾಗೂ ಕ್ಷಯದ್ವೀರ ಎಂಬ ಉಪಾಧಿಗಳೂ ಅನ್ವರ್ಥಕವಾಗಿವೆ. ಏಕೆಂದರೆ ಹಿಮಾಲಯದ ಕಣಿವೆಗಳಲ್ಲಿ ವಾಸಿಸುತ್ತಿದ್ದ ಆರ್ಯರಿಗೆ ಈ ವಿದ್ಯುತ್ತು ತುಂಬ ಘಾತುಕವೂ ಭಯಾನಕವೂ ಆಗಿತ್ತು. ಋಗ್ವೇದದ ಆರೇತೇಗೋಘ್ನ ಮುತಪೂರಷಘ್ನಂ ಕ್ಷಯದ್ವೀರಾಯ ಎಂಬ ಮಂತ್ರದಲ್ಲಿ ಶತ್ರುನಾಶಕನಾದ ಎಲೈ ರುದ್ರನೆ, ಗೋವು ಮತ್ತು ನರರನ್ನು ಕೊಲ್ಲುವ ನಿನ್ನ ಆಯುಧಗಳು ದೂರವಿರಲಿ. ನಮಗೆ ಸುಖವನ್ನುಂಟುಮಾಡು. ಹೇ ದೇವಾ! ನಮ್ಮವನಾಗು. ಪೃಥ್ವೀ-ಆಂತರಿಕ್ಷ ಮತ್ತು ಜ್ಞಾನ-ಕರ್ಮಗಳಿಗೆ ಸ್ವಾಮಿಯಾದ ನೀನು ನಮಗೆ ಸುಖವನ್ನುಂಟುಮಾಡು ಎಂಬ ಪ್ರಾರ್ಥನೆ ರುದ್ರನ ಸೌಮ್ಯ-ಭಯಂಕರ ಸ್ವರೂಪವನ್ನು ಚಿತ್ರಿಸಿದೆ.

ರುದ್ರನ ಮತ್ತೊಂದು ಉಪಾಧಿ ಕಪರ್ದಿನ್ ಎಂಬುದು. ಇಮಾರುದ್ರಾಯ ತವಸೇ ಕಪರ್ದಿನೇಕ್ಷಯ ದ್ವೀರಾಯ ಪ್ರಭರಾಮ ಹೇಮತೀಃ, ಇಲ್ಲಿ ಕಪರ್ದಿನ್ ಎಂದರೆ ಜಡೆಗಳನ್ನು ಧರಿಸಿದವ ಎಂದು ಅರ್ಥ. ಆಕಾಶದಲ್ಲಿ ತೇಲಿಬರುವ ಧೂಮ್ರವರ್ಣದ ಮೇಘಮಾಲೆ ನಿಜವಾಗಿಯೂ ಜಡೆಗಳಂತೆ ಇರುತ್ತದೆ. ಮಿಂಚು ಹೊಳೆದಾಗ ರುದ್ರನಿಗಿರುವ ಕಪರ್ದಿನ್ ಎಂಬ ವಿಶೇಷಣ ಅನ್ವರ್ಥಕವಾಗುತ್ತದೆ. ಈ ಉಪಾಧಿ ಆರ್ಯವಂಶಕ್ಕೆ ಸೇರಿದ ತೃತ್ಸುಗಳಿಗೂ ಇದೆ.

ದಿವೋವರಾಹ ಆಕಾಶದ ವರಾಹ (ಹಂದಿ) ಎಂದರೆ ಕಪ್ಪಾದ ಮೋಡಗಳಿಂದ ಹೊರಡುವ ಶ್ವೇತ ವಿದ್ಯುತ್ತಿನ ಉಪಮೆ ಬಿಳಿಯ ಕೋರೆದಾಡೆಗಳ ವರಾಹಕ್ಕೆ ಒಪ್ಪುತ್ತದೆ. ಸೌಮ್ಯರೂಪದಲ್ಲಿರುವ ರುದ್ರನನ್ನು ಮಹಾಭಿಷಕ್‍ಎಂದು ಕರೆಯಲಾಗುತ್ತದೆ. ಹೀಗೆ ರುದ್ರನಿಗಿರುವ ಕಪರ್ದಿನ್ ಮುಂತಾದ ಉಪಾಧಿಗಳಿಂದ ಆತನ ಸೌಮ್ಯ ಭಯಂಕರ ಸ್ವರೂಪ ವ್ಯಕ್ತವಾಗುತ್ತದೆ.

ರುದ್ರ-ವೃಷಭಃ ಉನ್ಮಾಮಮಂದ ವೃಷಭೋ ಎಂಬ ಮಂತ್ರದಲ್ಲಿರುವ ವೃಷಭ ಪದ ಬಯಸಿದುದನ್ನು ಮಳೆಯಂತೆ ಸುರಿಸುವವ ಎಂದೂ ಕ್ವಗಸ್ಯತೇ ರುದ್ರಮೃಳಯ.... ವೃಷಭ ಚಕ್ಷಮೀಥಾಃ ಎಂಬುದಕ್ಕೆ ಕಾಮವರ್ಷಕನಾದ ರುದ್ರ ಎಂದು ಸಂಬೋಧಿಸಿ ನೀನು ಪಾಪನಾಶಕ ಎಂದೂ ಸ್ತುತಿಸಲಾಗಿದೆ. ಸಾಮಾನ್ಯವಾಗಿ ವೃಷಭಶಬ್ಧಕ್ಕೆ ಎತ್ತು, ಗೂಳಿ ಎಂಬ ಅರ್ಥವಿದೆ. ಆದರೆ ಋಗ್ವೇದದಲ್ಲಿ ಯಾವ ಯಾವ ಮಂತ್ರಗಳಲ್ಲಿ ಈ ಪದ ಪ್ರಯುಕ್ತವಾಗಿದೆಯೋ ಅಲ್ಲೆಲ್ಲ ಈ ಪದಕ್ಕೆ ಶಾಬ್ದಿಕ ಅರ್ಥವನ್ನೇ ಗ್ರಹಿಸಲಾಗಿದೆ. ಮೇಲಾಗಿ ವೃಷಭ ಪದ ಋಗ್ವೇದದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ 170 ಸಲಕ್ಕಿಂತ ಹೆಚ್ಚಾಗಿ ಪ್ರಯುಕ್ತವಾಗಿದೆ. ಅಲ್ಲೆಲ್ಲ ಮಳೆ ಸುರಿಸುವವನು ಪ್ರಜೋತ್ಪತ್ತಿಗೆ ಕಾರಣವಾದ ವೀರ್ಯವನ್ನು ಯೋನಿಯಲ್ಲಿ ಬಿಡುವವನು ಎಂದು ಅರ್ಥವಿಸಲಾಗಿದೆ. ಆದ್ದರಿಂದಲೇ ಮಹಾನ್  ಪೌರುಷವುಳ್ಳವ ಮತ್ತು ಪ್ರಜನನ ಶಕ್ತಿಯುಳ್ಳವ ಎಂಬ ಎರಡೂ ಅರ್ಥಗಳಲ್ಲಿ ವೃಷಭ ಶಬ್ದ ರುದ್ರನಿಗೆ ಉಕ್ತವಾಗಿದೆ. ಮುಂದೆ ಅದು ಎತ್ತಿಗೆ ಸಾಮಾನ್ಯವಾಚಕವಾಯಿತು.
ರುದ್ರ-ಸೋಮ: ಒಂದು ಸೂಕ್ತದಲ್ಲಿ ರುದ್ರನನ್ನು ಸೋಮನ ಜೊತೆಗೆ ಆಹ್ವಾನಿಸಲಾಗಿದೆ. ಸೋಮಾರುದ್ರಾಧಾಯೇ ಥಾಂ ಎಂಬಲ್ಲಿ ಸೋಮಶಬ್ಧಕ್ಕೆ ವಿಶೇಷವಾದ ಅರ್ಥವಿದೆ. ಮುಂದೆ ಸೋಮನನ್ನು ಇಂದ್ರ-ಅಗ್ನಿ ಮತ್ತು ಪೂಷರೊಂದಿಗೆ ಕರೆಯಲಾಗಿದೆ. ಮುನ್ಮುಂದೆ ಸಂತಾನಪ್ರಾಪ್ತಿಗಾಗಿ ಸೋಮ ರುದ್ರನ ಹವಿಸ್ಸಿನ ವಿಧಾನವಿದೆ. ರುದ್ರ ಆರೋಗ್ಯ ಮತ್ತು ಬಲವನ್ನು ನೀಡುವ ದೇವತೆ. ಅದರಂತೆ ಸೋಮರಸವೂ ಸ್ಪೂರ್ತಿದಾಯಕ. ಸೋಮಾ ರುದ್ರಾಯುವ ಮೇತಾನ್ಯಸ್ಮೆ ಎಂಬ ಮಂತ್ರದಲ್ಲಿ ಎಲೈ ಸೋಮ ಮತ್ತು ರುದ್ರರೆ, ನೀವಿಬ್ಬರೂ ನಮ್ಮಲ್ಲಿ ರೋಗನಾಶಕ ಸಾಮಗ್ರಿ ತುಂಬಿರಿ, ಅಲ್ಲಿರುವ ದೋಷಗಳನ್ನು ಕಳೆಯಿರಿ ಎನ್ನಲಾಗಿದೆ.

ರುದ್ರ-ಅಗ್ನಿ: ರುದ್ರನ ಸ್ವರೂಪವನ್ನು ಪುಷ್ಟಿಗೊಳಿಸುವಲ್ಲಿ ಋಗ್ವೇದದ ಸೂಕ್ತಗಳಲ್ಲಿ ರುದ್ರ ಮತ್ತು ಅಗ್ನಿಗಳಿಗಿರುವ ಘನಿಷ್ಠ ಸಂಬಂಧ ಸ್ಪಷ್ಟವಾ ಗುತ್ತದೆ. ತ್ವವಗ್ನೇ ರುದ್ರೋ ಅಸುರೋ ಮಹೋದಿಶಃ ಎಂಬ ಮಂತ್ರದಲ್ಲಿ ಎಲೈ ಅಗ್ನಿಯೇ ನೀನು ಪ್ರಬಲರಾದ ಅಸುರರನ್ನು ಓಡಿಸತಕ್ಕ ರುದ್ರ ನಾಗಿರುವೆ ಎಂಬ ಹೊಗಳಿಕೆಯಿದೆ. ಈ ಮಂತ್ರದಲ್ಲಿ ರುದ್ರನಿಗೆ ಗಾಧಾಪತಿಂ ಮೇಧಪತಿಂ ರುದ್ರಂ  ಎಂಬ ವಿಶೇಷಣ ಯಜ್ಞಪಾಲಕ ಎಂದೂ ಹೇಳಲ್ಪಟ್ಟಿದೆ. ಇದರಿಂದ ರುದ್ರ ಮತ್ತು ಅಗ್ನಿಗಳಿಗಿರುವ ತಾದಾತ್ಮ್ಯ ಸ್ಪಷ್ಟವಾಗುತ್ತದೆ.

ರುದ್ರ ಮತ್ತು ಮರುತ್ ಪುತ್ರರು: ರುದ್ರನಿಗೆ ಮರುತ್ ಸಿತಾ ಎಂಬ ಉಪಾಧಿ ಇದೆ. ಏಕೆಂದರೆ ಆತ ಪೃಶ್ನಿಯಲ್ಲಿ ಪುರುತ್ತರನ್ನು ಸೃಷ್ಟಿಸಿದವ ಎನ್ನಲಾಗಿದೆ. ಋಗ್ವೇದದಲ್ಲಿ ಮರುತ್ತರ ಕಲ್ಪನೆ ಪವನ ದೇವತೆಯ ರೂಪದಲ್ಲಿ ವರ್ಣಿತವಾಗಿದೆ. ಆದ್ದರಿಂದಲೇ ಮರುತ್ತರನ್ನು ಪವನ (ವಾಯು) ದೇವತೆಯ ಸಂತಾನವೆಂದು ಹೇಳಿದ್ದು. ಮರುತ್ತರ ಮತ್ತೊಂದು ಹೆಸರು ಸಿಂಧುಮಾತರಃ ಪ್ರಾಯಃ ಇದು ವರ್ಷದ (ಮಳೆ) ಸಂಕೇತ ಇರಬೇಕು.

ರುದ್ರ-ಕೇಶಿ-ಮುನಿಃ ಋಗ್ವೇದದ ಉತ್ತರಭಾಗದ ಸೂಕ್ತದಲ್ಲಿ ರುದ್ರ ಕೇಶಿಯೊಡನೆ ವಿಷಪಾನ ಮಾಡಿದಂತೆ ಉಕ್ತವಾಗಿದೆ. ಕೇಶ್ಯಗ್ನಿಂ ಕೇಶೀ ವಿಷಂ ಕೇಶೀಭಿಭರ್ತಿ ಈ ಸೂಕ್ತದಲ್ಲಿ ವಿಷಪಾನದ ವಿಷಯ ಸ್ಪಷ್ಟವಾಗಿ ಲ್ಲವಾದರೂ ಅದನ್ನು ಲಾಕ್ಷಣಿಕವಾಗಿ ಗ್ರಹಿಸಬೇಕಿಲ್ಲ, ಕೆಲವು ಕಡೆ ಕೇಶ ಎಂದರೆ ಕಿರಣ ಎಂದು ಅರ್ಥವಿಸಿ, ಅವನು ಸೂರ್ಯ ಎಂದೂ ಹೇಳಲಾಗಿದೆ. ಋಗ್ವೇದದ ಮುನಿ ಸೂಕ್ತದಲ್ಲಿ ಬರುವ ಮುನಿಗಳು ಕೇಶಿಗಳು, ಜಟಾಧಾರಿಗಳು. ಇವರು ಗಗನಗಮನ, ವಾತಾಶನ ಮುಂತಾದ ಅಮಾನುಷ ಸಿದ್ಧಿಯುಳ್ಳವರು. ಎರಡನೆಯದಾಗಿ ಅಲ್ಲಿ ಪ್ರಯುಕ್ತವಾಗಿರುವ ಮುನಿ ಎಂಬ ಪದ ಸಹ ಸಂಸ್ಕøತದ ಮನ ಅವಬೋಧನೆ ಧಾತುನಿಷ್ಪನ್ನವಲ್ಲ. ಏಕೆಂದರೆ ಮುನಿ ಪದದಲ್ಲಿ ಉತ್ವವನ್ನು ಸಿದ್ಧಮಾಡುವ ಪಾಣಿನಿಯ ವ್ಯಾಕರಣದ ಸೂತ್ರವಿಲ್ಲದ್ದರಿಂದ ಮುನಿಪದವನ್ನು ಉಣಾದಿ ಆಕೃತಿ ಗಣದಲ್ಲಿ ಸೇರಿಸಲಾಗಿದೆ. ಕನ್ನಡ ಧಾತು ಪಾಠದಲ್ಲಿ “ಮುನಿಕ್ರೋಧೇ ತಹಶ್ವಿ ನಿಚ” (ಶಬ್ದಮಣಿ ದರ್ಪಣ) ಎಂಬ ಧಾತುನಿಷ್ಪನ್ನವಾದ ಮುನಿಪದವಾಚ್ಯರಾದ ಮುನಿಗಳು ಆರ್ಯವಂಶೀಯರಾಗದೆ ಪೂರ್ವ ದ್ರಾವಿಡ ಭಾಷಾವಾಚ್ಯರಾದ ದ್ರಾವಿಡ ಜನಾಂಗಕ್ಕೆ ಸೇರಿರಬೇಕು. ಈ ಕಾರಣದಿಂದ ರುದ್ರ `ಅಸುರನೆನಿಸಿ, ದ್ರಾವಿಡ ಮುಂದಾಳುವೆನಿಸಿರಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.  

ಅಥರ್ವವೇದ ಮತ್ತು ರುದ್ರನ ಸ್ವರೂಪ: ಅಥರ್ವವೇದದಲ್ಲಿ ವರ್ಣಿತವಾಗಿರುವ ರುದ್ರನ ಸ್ವರೂಪವನ್ನು ಅವಲೋಕಿಸಿದಾಗ-ಕಪ್ಪಾದ ಮೇಘಗಳಿಂದ ಹೊಮ್ಮುವ ವಿದ್ಯುತ್ತನ್ನು ಪುರುಷೀಕರಣಮಾಡಿರುವ ರುದ್ರನ ಕಲ್ಪನೆ ಅಥರ್ವವೇದ ಮಂತ್ರಗಳಿಂದ ಮತ್ತಷ್ಟು ಸ್ಪಷ್ಟವಾಗುತ್ತದೆ. ಅಥರ್ವವೇದದಲ್ಲಿ ಮೂರು ಸಲ ನೀಲಶಿಖಂಡಿನ್ (ನೀಲವರ್ಣದ ಕೇಶವುಳ್ಳವ) ಎಂದು ಹೇಳಲಾಗಿದೆ. ರುದ್ರಜಲಾಷಭೈಷಜ, ನೀಲ ಶಿಖಂಡಕರ್ಮಕೃತ್. ಎಂಬ ಮಂತ್ರಗಳಲ್ಲಿ ರುದ್ರನನ್ನು ನೀಲಶಿಶಖಂಡಕ ಎಂದು ಸಂಬೋಧಿಸಲಾಗಿದೆ ಮತ್ತು ಜಲಾಕ್ಷಬೇಹಜ ಎಲ್ಲರನ್ನೂ ರೋಗಗಳಿಂದಲೂ ಉದ್ಧರಿಸುವವ ಎಂದು ವರ್ಣಿಸಿರುವುದರಿಂದ ಆತ ದು:ಖಿಗಳ ಮೇಲೆ ಕೃಪೆಯುಳ್ಳವ ಎಂದು ಸ್ಪಷ್ಟವಾಗುತ್ತದೆ. ಸ್ತುಹಿ ಶ್ರುತಂ ಗರ್ತಸದಂ ಜನಾನಾಂ ರಾಜಾನಂ ಭೀಮಮುಪಹತ್ನಮುಗ್ರಂ ಎಂಬ ಮಂತ್ರದಲ್ಲಿ ಜನರಿಗೆ ಸ್ವಾಮಿಯೂ ದುಷ್ಟಶಿಕ್ಷಕನೂ ಬಲಿಷ್ಠನೂ ಆದ ರುದ್ರ ನಮ್ಮನ್ನು ರಕ್ಷಿಸಲಿ ಎಂದ ಸ್ತುತಿಸಲಾಗಿದೆ.

ರುದ್ರನಿಗೆ ಪಶುಪತಿ-ಮಹಾದೇವ-ಭವ-ಶರ್ವ ಉಪಾಧಿಗಳು ಯ ಈಶೇ ಪಶುಪತಿ: ಪಶೂನಾಂ ಎಂಬ ಮಂತ್ರದಲ್ಲಿ ರುದ್ರನನ್ನು ಮೊದಲ ಬಾರಿಗೆ ಪಶುಪತಿ ಎಂದು ವಿಶೇಷಿಸಲಾಗಿದೆ. ಪಶುಪತಿ ಪದ ಲಾಕ್ಷಣಿಕವಾಗಿ ಚತುಷ್ಪಾದ ಪಶುಗಳಿಗೆ ಒಡೆಯ ಎಂಬ ಅರ್ಥದಲ್ಲಿಯೂ ಆಧ್ಯಾತ್ಮಿಕವಾಗಿ ಆಣವ ಮಾಯಾ ಮತ್ತು ಕಾರ್ಮ ಎಂಬ ಮಲತ್ರಯ ಪಾಶಬದ್ಧರಾದ ಮಾನವರನ್ನು ಉದ್ಧರಿಸುವ ಪರಮಾತ್ಮ ಎಂಬುದಾಗಿಯೂ ರುದ್ರ ಸ್ತುತನಾಗಿದ್ದಾನೆ.

ಅಥರ್ವವೇದದಲ್ಲಿಯ ರುದ್ರನ ಮಾನವೀಕರಣ ಋಗ್ವೇದದಲ್ಲಿರುವುದ ಕ್ಕಿಂತ ಹೆಚ್ಚು ವಿಕಸಿತವಾಗಿದೆ. ಪ್ರಾರಂಭದ ರುದ್ರನ ಕಲ್ಪನೆ ಪ್ರಾಕೃತಿಕ ತತ್ತ್ವವನ್ನು ಹಿಡಿದು ಹೊರಟದ್ದು ಆದರೆ ಅದು ಅಥರ್ವವೇದಕಾಲಕ್ಕೆ ಮಾಸತೊಡಗಿತ್ತು. ಈಗ ರುದ್ರನ ಅನುಚರರಾದ ಗಣಗಳ ಪ್ರಸ್ತಾಪ ನಡೆದಿದೆ. ಸಾಮಾನ್ಯವಾಗಿ ಅವರನ್ನು ದಶರುದ್ರರೆಂದು ಕರೆಯಲಾಗುತ್ತಿತ್ತು. ಇವರು ನಿಜವಾಗಿಯೂ ಋಗ್ವೇದದ ಕಾಲದ ಮರುತ್ತುಗಳೇ! ಆದರೆ ಈ ದಶರುದ್ರರ ಪ್ರಸ್ತಾಪ ಯುಜುರ್ವೇದದ ರುದ್ರಾಧ್ಯಾಯದಲ್ಲಿ ಶತರುದ್ರರು ಎಂದು ವಿಸ್ತರಿಸಿ ವರ್ಣಿಸಲಾಗಿದೆ.

ಇಲ್ಲಿ ರುದ್ರನ ಬಾಣಗಳು ಪ್ರಾಣಿಗಳನ್ನು ಕೊಲ್ಲುವುದಿಲ್ಲ. ಬದಲಾಗಿ ಅವು ರೋಗಗಳನ್ನು ಹರಡುತ್ತವೆ. ಆ ರೋಗಗಳನ್ನು ವಾಸಿಮಾಡಲು ಮಂತ್ರಗಳಲ್ಲಿ ಔಷಧಗಳು ಹೇಳಲ್ಪಟ್ಟಿವೆ. ಇದಮಿದಂ ಮತ್ತು ಶಂಚ ನೋ ಎಂಬ ಮಂತ್ರಗಳಲ್ಲಿಯ ಮಾತುಗಳು ಈ ಅರ್ಥವನ್ನು ಸಮರ್ಥಿಸುತ್ತವೆ. ಇನ್ನು ರುದ್ರೋ ವೋ ಗ್ರೀವೂ ಅಶರೈತ್ ಪಿಶಾಚಾ ಎಂಬ ಮಂತ್ರದಲ್ಲಿ ಭೂತ ಪಿಶಾಚಾದಿಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ರುದ್ರನನ್ನು ಸ್ತುತಿಸಲಾಗಿದೆ.

ರುದ್ರಮಹಾದೇವ: ಅಥರ್ವವೇದದಲ್ಲಿ ರುದ್ರ ತನ್ನ ಲೋಕಪ್ರಿಯತೆ ಯಿಂದ ಮತ್ತು ಬಲಿಷ್ಠನಾದ್ದರಿಂದ ಅವನಿಗೆ ಮಹಾದೇವ ಎಂಬ ಉಪಾಧಿ ಕೂಡಲ್ಪಟ್ಟಿತು. ಮತ್ತೆ ಕೆಲವು ಮಂತ್ರಗಳಲ್ಲಿ ರುದ್ರನನ್ನು ಸಹಸ್ರಾಕ್ಷಭವ, ಶರ್ವ ಮುಂತಾದ ವಿಶೇಷಣಗಳು ರುದ್ರನಲ್ಲಿ ತಾದಾತ್ಮ್ಯ ಹೊಂದಿವೆ.

ಅಥರ್ವ ವೇದದ ವ್ರಾತ್ಯಕಾಂಡ ಮತ್ತು ರುದ್ರ; ಅಥರ್ವಸಂಹಿತೆಯ 15ನೆಯ ಅಧ್ಯಾಯಕ್ಕೆ ವ್ರಾತ್ಯಕಾಂಡ ಎಂಬ ಹೆಸರಿದೆ. ಅಥರ್ವವೇದದಲ್ಲಿ ವ್ರಾತ್ಯನನ್ನು ಪರಮಾತ್ಮನೆಂದೂ ಭಾವಿಸಲಾಗಿದೆ. ವ್ರಿಯಂತೆ ದೇಹೇನ ಇತಿ ವ್ರತಾಃ ತೇಷಾಂ ಸಮೂಹಾಃ ವ್ರಾತಾಃ ಜೀವಸಮಾಹಾಃ, ತೇಷಾಂ ಪತಿಃ ವ್ರಾತ್ಯಃ ಜೀವ ಸಮೂಹಾಃ ತೇಷಾಂ ಪತಿಃ ವ್ರಾತ್ಯಃ ಪರಮೇಶ್ವರಃ.

ಯಜುರ್ವೇದ ರುದ್ರಾಧ್ಯಾಯದಲ್ಲಿ ವ್ರಾತೇಭ್ಯೊ ವಾತಪತಿಭ್ಯಶ್ಚ ಎಂದು ವ್ರಾತ್ಯರಿಗೆ ನಮನವನ್ನು ಹೇಳಿದೆ. ಅಚಾರ್ಯ ಶಂಕರರು ವ್ರಾತ್ಯರು ಮತ್ತು ಯವನರು ಮ್ಲೇಚ್ಛರಿಗೆ ಸಮ ಎಂದು ಹೇಳಿರುವರಾದರೂ ಸಾವಿತ್ರೀ ಪತಿತಾವ್ರಾತ್ಯಾ ಎಂದರೆ ಉಪನಯನ ಸಂಸ್ಕಾರವಿಲ್ಲದವ ವ್ರಾತ್ಯ ಎಂಬ ಉಕ್ತಿಯನ್ನು ವಿಶ್ಲೇಷಿಸುತ್ತಾ ವ್ರಾತ್ಯನೇ ಮೊಟ್ಟಮೊದಲು ಹುಟ್ಟಿದವ. ಆಗ ಅವನಿಗೆ ಸಂಸ್ಕಾರ ಮಾಡಲು ಬೇರೆಯಾರೂ ಇಲ್ಲವಾದ್ದ ರಿಂದ ಅವನ ಪ್ರಕೃತಿಯಿಂದ ಶುದ್ಧನಾದವ ಎಂದು ಅರ್ಥಪೂರ್ಣವಾಗಿ ಹೇಳಿದ್ದಾರೆ. ವ್ರಾತ್ಯ ಸಂಸ್ಕøತಿಯ ಬಗೆಗೆ ಆಳವಾಗಿ ಅಭ್ಯಾಸಮಾಡಿರುವ ರಾಧಾಕೃಷ್ಣಚೌಧರಿಯವರು (ವ್ರಾತ್ಯಾಸ್ ಇನ್ ಏನ್ಷಿಯಂಟ್ ಇಂಡಿಯ) ಎಂಬ ಗ್ರಂಥದಲ್ಲಿ ವ್ರಾತ್ಯರು ಆರ್ಯೇತರ ಭಾಷೆಯನ್ನಾಡುತ್ತಿದ್ದರು. ಸಾಂಸ್ಕøತಿಕವಾಗಿ ದಾನವರು ಕರ್ಮಮಾಡದವರು. ಯಾಗ ಮಾಡದವರು. ಲಿಂಗಪೂಜಾಸಕ್ತರು. ಅವರು ಆರ್ಯರಿಗೂ ಹಿಂದಿದ್ದ ಭಾರತದ ಮೂಲ ನಿವಾಸಿಗಳು ಆರ್ಯೇತರ ಭಾಷೆಯನ್ನು (ಮೃದ್ವಾಚಃ) ಆಡುತ್ತಿದ್ದರೆಂದು ಋಗ್ವೇದದಿಂದ ತಿಳಿದು ಬರುತ್ತದೆ ಎಂದಿದ್ದಾರೆ.

ಸಂಪೂರ್ಣಾನಂದರು ಅಥರ್ವವೇದದಲ್ಲಿ ವ್ರಾತ್ಯನನ್ನು ಪರಮಾತ್ಮನೆಂದು ಭಾವಿಸಲಾಗಿದೆ ಎಂದಿದ್ದಾರೆ. ಅಥರ್ವವೇದದ ಏಕವ್ರಾತ್ಯ (ಪರಮಾತ್ಮ) ಲೋಕಕಲ್ಯಾಣಕ್ಕಾಗಿ ಎಲ್ಲ ದಿಕ್ಕುಗಳಿಗೂ ಸಂಚರಿಸುತ್ತಿದ್ದ. ಯಜುರ್ವೇದ ಮತ್ತು ಅಥರ್ವವೇದಗಳ ಮಧ್ಯಂತರದಲ್ಲಿ ಶಿವನ ಅಷ್ಟಮೂರ್ತಿತ್ವ ನಿರ್ದಿಷ್ಟ ರೂಪ ತಳೆಯಿತು. ಪೂರ್ವಭಾಗದಲ್ಲಿ ಭವ, ದಕ್ಷಿಣದಲ್ಲಿ ಶರ್ವ, ಪಶ್ಚಿಮದಲ್ಲಿ ಪಶುಪತಿ, ಕೆಳಗಡೆ ರುದ್ರ, ಮೇಲ್ಭಾಗದಲ್ಲಿ ಮಹಾದೇವ, ಮಧ್ಯದಲ್ಲಿ (ಎಲ್ಲೆಡೆಯೂ) ಈಶಾನನನ್ನು ನೆಲೆ ಗೊಳಿಸಲಾಗಿದೆ.

ವ್ರಾತ್ಯ ಬ್ರಹ್ಮನನ್ನು ತನ್ನಲ್ಲಿ ಸಮೀಕ್ಷಿಸಿದಾಗ ಅವನು ಸುವರ್ಣವನ್ನು ಕಂಡ. ಆ ಸುವರ್ಣ ಬೆಳೆದು ಈಶಾನಾವಾಯಿತು, ಮಹಾದೇವವಾಯಿತು, ಏಕವ್ರಾತ್ಯವಾಯಿತು ಎಂಬ ಅಥರ್ವವೇದದ ವರ್ಣನೆ ರುದ್ರನ ಸ್ವರೂಪವೇ ಆಗಿದೆ.

ಸಮಸ್ತ ಭೂಮಂಡಲದಲ್ಲಿ ಶ್ರೇಷ್ಠ ದೇವತೆಯಾದ ಏಕವ್ರಾತ್ಯನೇ ಮಹಾದೇವ, ಮುಖ್ಯ ವ್ರಾತ್ಯ, ಪ್ರಜಾಪತಿಯನ್ನು ಸೃಜಿಸಿದವನೂ ಅವನೇ. ಸಿಂಧೂನದಿಯ ಕಣಿವೆಯ ನಾಗರಿಕತೆಯಲ್ಲಿ ಶಿವನ ಉಲ್ಲೇಖವಿದೆ. ಅಲ್ಲಿ ಶಿವನನ್ನು ಅಲೆಮಾರಿ (ಜಂಗಮ) ವ್ರಾತ್ಯದೇವತೆ ಎಂದು ಕರೆಯಲಾಗಿದೆ. ಅಮೃತಸ್ಯ ನಾಭಿಃ ಎಂದು ಸ್ತುತನಾದವನೂ ಈ ಏಕವ್ರಾತ್ಯನೇ.

ರುದ್ರ ಪರ್ವತ ದೇವತೆ, ಜಟಾಧಾರಿ, ಕೃತ್ತಿವಾಸ, ಚರ್ಮಾಂಬರಧಾರಿ, ಬಿಲ್ಲುಗಾರ(ಧನ್ವಿ) ಪ್ರಳಯವನ್ನುಂಟುಮಾಡುವವ. ಅನೇಕ ದೇವತೆಗಳು ಆವಿರ್ಭವಿಸಿದ್ದು ರುದ್ರನಲ್ಲಿಯೇ. ರುದ್ರ, ಈಶಾನ-ಮಹಾದೇವರು ವ್ರಾತ್ಯರ ತ್ರಿಮೂರ್ತಿಗಳು ಇವರೆಲ್ಲ ಏಕವ್ರಾತ್ಯದೇವತೆಯ ವಿವಿಧ ರೂಪಗಳು.

ಮೊದಮೊದಲು ಶಿವನಿಗೆ ವೈದಿಕಯಾಗದಲ್ಲಿ ಯಾವ ಸ್ಥಾನವೂ ಇರಲಿಲ್ಲ. ವೈದಿಕದೇವತೆಗಳಲ್ಲಿ ಶಿವನಿಗೆ ಅಧ್ಯಕ್ಷ ಪದವಿ ದೊರೆತದ್ದು ದಕ್ಷಯಾಗದ ತರುವಾಯ. ಸ ರುದ್ರೋ ದಕ್ಷ ಸಾಧನೋ ವಿಯಸ್ತಸ್ತಂಭ ರೋದಸೀ ದಕ್ಷನನ್ನು ಶಿಕ್ಷಿಸಿದ ಆ ವೀರಭದ್ರ ಭೂಮ್ಯಾಕಾಶಗಳನ್ನು ಸ್ತಂಭಿಸಿದ. ದೂಷ್ಯರೆನಿಸಿದ್ದ ವ್ರಾತ್ಯರ ದೇವತೆಯಾದ ಶಿವ ವೈದಿಕದೇವತೆಗಳ ಗಂಪಿಗೆ ಸೇರಬೇಕಾದರೆ ಉಗ್ರ ಹೋರಾಟದ ಅಗತ್ಯವಿತ್ತು. ಅನಂತರ ವ್ರಾತ್ಯರಿಗೆ ಸಂದ ಗೌರವ ಅಪಾರ. ರಾಧಾಕೃಷ್ಣ ಚೌಧರಿಯವರು ಹೇಳುವಂತೆ ಆರ್ಯಬ್ರಾಹ್ಮಣನ ಮನೆಗೆ ವ್ರಾತ್ಯ-ಅತಿಥಿಯಾಗಿ ಬಂದರೆ ಆ ಬ್ರಾಹ್ಮಣ ಯಜ್ಞಮಾಡುತ್ತಿದ್ದರೆ ಅವನು ಕೂಡಲೇ ಎದ್ದುನಿಂತು ಅತಿಥಿಯನ್ನು ಸ್ವಾಗತಿಸಬೇಕು ಮತ್ತು ಯಜ್ಞವನ್ನು ಮಾಡಲು ಅತಿಥಿಯನ್ನೇ ಪ್ರಾರ್ಥಿಸಬೇಕು. ಅದಕ್ಕೆ ಆತ ಒಪ್ಪದಿದ್ದರೆ ಮಾತ್ರ ಆ ಗೃಹಸ್ಥ ತಾನೇ ಯಜ್ಞವನ್ನು ಪೂರ್ಣಗೊಳಿಸಬೇಕು.

ರುದ್ರ ಸೌಮ್ಯಭಯಂಕರ ಸ್ವರೂಪವೇ ಶಿವ-ರುದ್ರ ಎನಿಸಿತು. ಅದೇ ವೀರ-ಭದ್ರ(ಶಿವ) ಎನಿಸಿತು. ಅದೇ ವೀರ-ಶೈವ ಎನಿಸಿತು.	
		
(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ